Sri Sushameendrateertharu (ಶ್ರೀಸುಶಮೀಂದ್ರತೀರ್ಥರ )

ಶ್ರೀಸುಶಮೀಂದ್ರತೀರ್ಥರ

ಶ್ರೀರಾಘವೇಂದ್ರಗುರುಸಾರ್ವಭೌಮರ ನಂತರ ಅವರ ವೇದಾಂತ ಸಾಮ್ರಾಜ್ಯವನ್ನಾಳಿದ ಮಹಾತ್ಮರನೇಕರಲ್ಲಿ ಶ್ರೀಸುಮತೀಂದ್ರತೀರ್ಥರು, ಶ್ರೀವಾದೀಂದ್ರತೀರ್ಥರು, ಶ್ರೀವರದೇಂದ್ರತೀರ್ಥರು, ಶ್ರೀಧೀರೇಂದ್ರತೀರ್ಥರು, ಶ್ರೀಸುಜ್ಞಾನೇಂದ್ರತೀರ್ಥರು, ಶ್ರೀಸುಧರ್ಮೇಂದ್ರ ತೀರ್ಥರು ಮತ್ತು ಶ್ರೀಸುಗುಣೇಂದ್ರತೀರ್ಥರು ಪ್ರಮುಖರು. ಶ್ರೀಸುಜ್ಞಾನೇಂದ್ರತೀರ್ಥರಿಗೆ ಪೂರ್ವಾಶ್ರಮದಲ್ಲಿ ರಾಜಗೋಪಾಲಾಚಾರ್ಯರು ಮತ್ತು ವೆಂಕಟರಾಮಾಚಾರ್ಯರೆಂಬುವರು ಇಬ್ಬರು ಪುತ್ರರು. ರಾಜಗೋಪಾಲಾಚಾರ್ಯರು ಶ್ರೀ ಮಠದ ಆಡಳಿತದಲ್ಲಿ ಶ್ರೀಗಳವರಿಗೆ ಸಹಾಯಹಸ್ತರಾಗಿ ಗುರುರಾಜರ ಸೇವೆಯನ್ನು ಮಾಡಿದರು. ಇವರಿಂದಲೇ ಈ ಮನೆತನಕ್ಕೆ ‘ರಾಜಾ’ ಇಂಬ ಬಿರುದು ಬಂದದ್ದು.

ಶ್ರೀಯುತ ರಾಜಾ ರಾಜಗೋಪಾಲಾಚಾರ್ಯರಿಗೆ, ರಾಜಾ ವೆಂಕಟರಾಘವೇಂದ್ರ್ರಾಚಾರ್ಯ, ರಾಜಾ ಗುರುರಾಜಾಚಾರ್ಯ (ಶ್ರೀಸುಪ್ರಜ್ಞೇಂದ್ರತೀರ್ಥರು) ಹಾಗೂ ರಾಜಾ ಶ್ರೀನಿವಾಸಾಚಾರ್ಯರು ಮಕ್ಕಳು. ಹಿರಿಯರಾದಾ ರಾಜಾ ವೆಂಕಟರಾಘವೇಂದ್ರ್ರಾಚಾರ್ಯರಿಗೆ 1) ರಾಜಾ ವೇಣುಗೋಪಾಲಚಾರ್ಯರು (ಶ್ರೀ ಸುಕೃತೀಂದ್ರತೀರ್ಥರು), 2) ರಾಜಾ ಕೃಷ್ಣಾಚಾರ್ಯರು (ಶ್ರೀಸುಶೀಲೇಂದ್ರತೀರ್ಥರು), 3) ರಾಜಾ ಸುಜ್ಞಾನೇಂದ್ರ್ರಾಚಾರ್ಯರು ಎಂಬ ಮೂರು ಜನ ಮಕ್ಕಳು.

ಶ್ರೀಯುತ ರಾಜಾ ಸುಜ್ಞಾನೇಂದ್ರ್ರಾಚಾರ್ಯರಿಗೆ 1)ರಾಜಾ ರಾಜಗೋಪಾಲಾಚಾರ್ಯ 2) ರಾಜಾ ವೆಂಕಟರಾಘವೇಂದ್ರಾಚಾರ್ಯ 3) ಕೃಷ್ಣವೇಣಮ್ಮ ಎಂಬ ಮೂರು ಮಕ್ಕಳು. ಹಿರಿಯರಾದ ರಾಜಾ ರಾಜಗೋಪಾಲಾಚಾರ್ಯರ ಹಿರಿಯ ಪುತ್ರರೇ ಶ್ರೀಸುಪ್ರಜ್ಞೇಂದ್ರಾಚಾರ್ಯರು (ಶ್ರೀ ಸುಶಮೀಂದ್ರತೀರ್ಥರ ಪೂರ್ವಾಶ್ರಮನಾಮ). ರಾಜಾ ಸುಜ್ಞಾನೇಂದ್ರಾಚಾರ್ಯರು ತಮ್ಮ ಚಿಕ್ಕಪ್ಪನವರಾದ ರಾಜಾ ಗುರುರಾಜಾಚಾರ್ಯರಿಗೆ (ಶ್ರೀಸುಪ್ರಜ್ಷೇಂದ್ರತೀರ್ಥರು) ದತ್ತು ಹೋಗಿದ್ದರು. ಆ ಕಾರಣದಿಂದಲೇ ಇವರಿಗೆ ಸುಪ್ರಜ್ಞೇಂದ್ರ ಎಂಬ ನಾಮಕರಣವಾಯಿತು. ತಾಯಿ ಪದ್ಮಾವತಿಬಾಯಿ – ಶ್ರೀರಾಯರ ಮಠದ ಪೀಠಾಧೀಶರಾದ ಶ್ರೀಸುವ್ರತೀಂದ್ರತೀರ್ಥರ ಪೂರ್ವಾಶ್ರಮದ ಮಗಳು. ಸದಾ ಗುರುಹಿರಿಯರಲ್ಲಿ ಅತ್ಯಂತ ಶ್ರದ್ಧೆ, ಭಕ್ತಿಯಿಂದ ವರ್ತಿಸುತ್ತಿದ್ದ ಸದ್ಗುಣಿ.

ಪೂರ್ವಾಶ್ರಮ:

ಶ್ರೀಸುಪ್ರಜ್ಞೇಂದ್ರಾಚಾರ್ಯರು ಜನಿಸಿದ್ದು ಅಕ್ಷಯನಾಮ ಸಂವತ್ಸರದ ಅಧಿಕ ಚೈತ್ರ ಬಹುಳ ಪಂಚಮಿ, ಶನಿವಾರ, ನಂಜನಗೂಡಿನ ‘ದೊಡ್ಡಮನೆ’ಯಲ್ಲಿ. ಆಂಗ್ಲಕಾಲಮಾನದಲ್ಲಿ ದಿನಾಂಕ 03/04/1926ರಂದು. ಗೌತಮ ಗೋತ್ರದ, ಬೀಗಮುದ್ರೆ ಮನೆತನದಲ್ಲಿ, ರಾಯರ ಪೂರ್ವಾಶ್ರಮ ವಂಶದಲ್ಲಿ, ರಾಯರ ಅಂತರಂಗ ಭಕ್ತರ ಜನನ. ಈ ಘಳಿಗೆ ಜ್ಯೋತಿಷ್ಯಾಸ್ತ್ರದ ಲೆಕ್ಕಾಚಾರದಲ್ಲಿ ‘ಗಜಕೇಸರೀ’ ಯೋಗದಿಂದ ಕೂಡಿತ್ತು.

ಜಾತಕರ್ಮ, ನಾಮಕರಣಾದಿಗಳ ನಂತರ, ಆಗಿನ ಕಾಲದ ರಾಯರ ಮಠದ ಪೀಠಾಧಿಪತಿಗಳಾದ ಶ್ರೀಸುಶೀಲೇಂದ್ರತೀರ್ಥರಲ್ಲಿಗೆ ರಾಜಗೋಪಾಲಚಾರ್ಯ ದಂಪತಿಗಳು ಈ ಮಗುವನ್ನು ಆಶೀರ್ವಾದ ಪಡೆದುಕೊಳ್ಳುವ ಸಲುವಾಗಿ ಕರೆದೊಯ್ದರು.  ಆ ಮಗುವನ್ನು ಕಂಡ ಶ್ರೀಗಳು ಅತ್ಯಂತ ಹರ್ಷಚಿತ್ತರಾಗಿ ಶಿರದಲ್ಲಿ ಕೈಯಿಟ್ಟು ಹರಸಿ ಆಗಿನ ಕಾಲದಲ್ಲಿಯೇ ಒಂದು ಪಾವು ಬಂಗಾರವನ್ನು ಕೊಟ್ಟು ಮಗುವಿಗೆ ಆಭರಣ ಮಾಡಿಸಬೇಕೆಂದು ಆಜ್ಞಾಪಿಸಿದರು.

ಚೌಲ, ಉಪನಯನ ಸಂಸ್ಕಾರಗಳ ನಂತರ, ನಂಜನಗೂಡಿನ ವಿದ್ಯಾಪೀಠದಲ್ಲಿ ವೇದಾಧ್ಯಯನ, ಶಾಸ್ತ್ರಾಧ್ಯಯನ.

ಸುಪ್ರಜ್ಞೇಂದ್ರಾಚಾರ್ಯರು ತಮ್ಮ ಯೌವ್ವನಾವಸ್ಥೆಯಲ್ಲಿ ಮೈಸೂರಿನ ಸುಬ್ಬರಾಯನ ಕೆರೆ ಶ್ರೀರಾಯರ ಮಠದಲ್ಲಿ ಧರ್ಮಾಧಿಕಾರಿಯಾಗಿ ಸೇವೆ ಮಾಡಲಾರಂಭಿಸಿದ್ದರು. ಮತ್ತು ಅಲ್ಲಿಯೇ ತನ್ನ ಮಾವಂದಿರಾದ ಅರಮನೆಯ ಆಸ್ಥಾನ ವಿದ್ವಾನ್ ಮತ್ತು ಶ್ರೀಮಠದ ವ್ಯವಸ್ಥಾಪಕರಾದ ವಿದ್ವಾನ್ ಹುಲಿ ಶ್ರೀನಿವಾಸಾಚಾರ್ಯರಲ್ಲಿ ವೇದಾಂತ ಅಧ್ಯಯನವನ್ನು ಮಾಡುತ್ತಾ ತನ್ನ ತಂದೆಯಂತೆಯೇ ಶ್ರೀ ಮಠದ ಪದ್ಧತಿ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಾ ಶ್ರೀಗುರುರಾಜರ ಸೇವೆಯನ್ನು ಮಾಡುತ್ತಿದ್ದರು.  ಆಚಾರ್ಯರು ಮೂವತ್ತಾರನೇ ವಯಸ್ಸಿನಲ್ಲಿರುವಾಗ ದಿನಾಂಕ 09-09-1962ರಲ್ಲಿ ತಂದೆ ರಾಜಗೋಪಾಲಾಚಾರ್ಯರು ದೈವಾಧೀನರಾದರು. ಪಿತೃ ವಿಯೋಗದಿಂದ ಬಹು ನೊಂದಿದ್ದ ಆಚಾರ್ಯರಿಗೆ ಚಿಕ್ಕಪ್ಪಂದಿರಾದ     ರಾಜಾ ವೆಂಕಟರಾಘವೇಂದ್ರಾಚಾರ್ಯರು ಮಾರ್ಗದರ್ಶಿಗಳಾದರು. ಒಂದು ವರ್ಷದ ನಂತರದಲ್ಲಿ (05-11-1963) ಚಿಕ್ಕಪ್ಪಂದಿರೂ ಕೂಡ ಪರಮಹಂಸಾಶ್ರಮವನ್ನು ಸ್ವೀಕರಿಸಿ ರಾಯರ ಮಠದ ಪರಂಪರೆಯಲ್ಲಿ ‘ಶ್ರೀಸುಜಯೀಂದ್ರತೀರ್ಥ’ರಾದರು.

ಮುಂದೆ ಶ್ರೀಸುಜಯೀಂದ್ರತೀರ್ಥರ ಹಾಗೂ ಹಿರಿಯರ ಆದೇಶದಂತೆ ಅಲ್ಲಿಯ ನಿವಾಸಿಗಳಾದ ಮಾನವಿ ಧೀರೇಂದ್ರಾಚಾರ್ಯ ಎಂಬುವರು ಇವರ ವಿನಯಶೀಲತೆ, ಭಕ್ತಿ, ಮುಗ್ಧತೆ ಮುಂತಾದ ಗುಣಗಳನ್ನು ಕಂಡು ಮಾರುಹೋಗಿ ತನ್ನ  ಮಗಳಾದ ಶಾಂತಾಬಾಯಿಯನ್ನು  ಸುಪ್ರಜ್ಞೇಂದ್ರ್ರಾಚಾರ್ಯರಿಗೆ ತಂದುಕೊಳ್ಳಬೇಕೆಂದು ಪ್ರಾರ್ಥಿಸಿದರು. ನಂಜನಗೂಡಿ ನಲ್ಲಿರುವ ಸುಪ್ರಜ್ಞೇಂದ್ರ್ರಾಚಾರ್ಯರ ಸ್ವಗೃಹದಲ್ಲಿ  ಅತಿ ವೈಭವದಿಂದ ಕ್ರೋಧಿನಾಮ ಸಂವತ್ಸರದ ಜ್ಯೇಷ್ಠ ಬಹುಳ ಚತುರ್ಥಿ ದಿನಾಂಕ 29/06/1964ರಂದು  ವಿವಾಹವು ನೆರವೇರಿತು. ಅಣ್ಣಂದಿರಾದ ರಾಜಾ ಎಸ್ ಗುರುರಾಜಾಚಾರ್ಯ ದಂಪತಿಗಳು ಹಸೆಮಣೆಯಲ್ಲಿ ಕೂತು ವಿವಾಹವನ್ನು ನಡೆಸಿದರು.

ಎಲ್ಲರನ್ನೂ ಪ್ರೀತಿಸುತ್ತಾ, ಎಲ್ಲರೊಂದಿಗೂ ಬೆರೆಯುತ್ತಾ, ಅಭಿಮಾನ-ಅಂತಃಕರಣದಿಂದ ವ್ಯವಹರಿಸುತ್ತಾ, ದೇವ-ಗುರುಗಳಲ್ಲಿ ಭಕ್ತಿಯಿಂದ ವರ್ತಿಸುತ್ತಾ ಸಾಗಿದ್ದ ಜೀವನ ಸುಪ್ರಜ್ಞೇಂದ್ರಾಚಾರ್ಯರದ್ದಾಗಿತ್ತು. ಪ್ರತಿ ಸೋಮವಾರ ಶ್ರೀಕಂಠೇಶ್ವರನ ದರ್ಶನ ತಪ್ಪುತ್ತಿರಲಿಲ್ಲ. ಪ್ರತಿ ಹುಣ್ಣಿಮೆ ಶ್ರೀಸತ್ಯನಾರಾಯಣದೇವರ ದರ್ಶನ ಪಡೆದು, ಪ್ರಸಾದವನ್ನು ಊರಿನ ಎಲ್ಲಾ ಸಂಬಂಧಿಕರ ಮನೆಗೆ ತಲುಪಿಸಿ ತಾವು ಮನೆಗೆ ವಾಪಾಸಾಗುತ್ತಿದ್ದರು. ಹೆಚ್ಚಿನ ತಮ್ಮ ಕೆಲಸಗಳನ್ನು ತಾವೇ ನಿರ್ವಹಿಸುತ್ತಿದ್ದರು. ಮಕ್ಕಳು ಮಡದಿಯೊಡನೆ ಮೃದು-ಮಧುರ ಮಾತುಗಳು, ವ್ಯವಹಾರದಲ್ಲಿ ಮುಗ್ಧತೆ, ಯಾರನ್ನೂ ನೋಯಿಸದೆ-ಎಲ್ಲರನ್ನೂ ಪ್ರೀತಿಸುವ ಕರುಣಾ ಹೃದಯ — ಇವುಗಳು ಆದರ್ಶ ಸಾಂಸಾರಿಕ ಜೀವನಕ್ಕೆ ನಿದರ್ಶನ.

ಸಂನ್ಯಾಸ:

ಶ್ರೀಸುಶಮೀಂದ್ರತೀರ್ಥರ

ಶ್ರೀಸುಶಮೀಂದ್ರತೀರ್ಥರ

ಮೈಸೂರಿನ ಸುಬ್ಬರಾಯನಕೆರೆ ರಾಯರ ಮಠದಲ್ಲಿ ಧರ್ಮಾಧಿಕಾರಿಗಳಾಗಿ ರಾಯರ ಸೇವೆ ಮಾಡುತ್ತಿದ್ದ ಶ್ರೀಸುಪ್ರಜ್ಞೇಂದ್ರಾಚಾರ್ಯರನ್ನು ಮಂತ್ರಾಲಯದ ರಾಯರ ಮೂಲಬೃಂದಾವನ ಸನ್ನಿಧಿಗೆ ಬರಮಾಡಿಕೊಂಡರು ಶ್ರೀಸುಜಯೀಂದ್ರತೀರ್ಥರು. ಶ್ರೀಪಾದಂಗಳವರ ಅನುಗ್ರಹ ರಕ್ಷೆಯಲ್ಲಿ, ತಾವು ತಿಳಿದಿದ್ದ ಶ್ರೀಮಠದ ಸಂಪ್ರದಾಯ ಪರಂಪರೆಯನ್ನು ಮತ್ತಷ್ಟು ವೃದ್ದಿಸಿಕೊಳ್ಳತೊಡಗಿದರು. ಶ್ರೀ ಮಠದ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಆ ಮೂಲಕ ಶ್ರೀಮನ್ ಮೂಲರಾಮದೇವರ ಹಾಗೂ ಗುರುರಾಜರ ಸೇವೆಯನ್ನು ಮಾಡಲಾರಂಭಿಸಿದರು. ನಿಷ್ಕಲ್ಮಶವಾದ, ನಿರಂತರವಾದ, ನಮ್ರಭಕ್ತಿಪೂರ್ವಕವಾದ ಸೇವೆಯಾಗಿತ್ತು ಅದು. ನಿರಾಯಾಸವೂ, ಬೇಸರ ರಹಿತವೂ, ಆನಂದಭರಿತವೂ ಆಗಿತ್ತು ಆ ಸೇವೆ. ಮುಗ್ಧಮನಸ್ಸಿನ ಆಚಾರ್ಯರ ಈ ಸೇವೆ, ಸತತವಾಗಿ ನೆರವೇರುತ್ತಾ ಸುಮಾರು ಮೂರು ವರ್ಷ ಕಳೆಯಿತು. ಆಚಾರ್ಯರ ಸೇವೆಗೆ ಸಮರ್ಥವಾದ ಪ್ರತಿಫಲ ದೊರೆಯುವ ಕಾಲವು ಸಮೀಪಿಸಿತು. ಗುರುಗಳಾದ ಶ್ರೀಸುಜಯೀಂದ್ರತೀರ್ಥರಿಗೆ ಆಚಾರ್ಯರ ಈ ಸೇವಾಮನೋಭಾವವನ್ನು ಕಂಡು ಅತೀವ ಸಂತೋಷವಾಯಿತು. ಶ್ರೀಮಠದ ಪರಂಪರೆ, ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಯೋಗ್ಯ ಜೀವಿಯ ಹುಡುಕಾಟದ ಪ್ರಶ್ನೆಗೆ ಉತ್ತರ ದೊರಕಿದಂತಾಯಿತು.

ಈ ಸಂಧರ್ಭದಲ್ಲಿ ನಡೆದ ಒಂದು ಘಟನೆ ತುಂಬಾ ರೋಚಕ.

ಶ್ರೀಸುಪ್ರಜ್ಞೇಂದ್ರಾಚಾರ್ಯರು ತಮ್ಮ ಸೋದರತ್ತೆಯ ಮರಣ ವಾರ್ತೆಯನ್ನು ಕೇಳಿ ಗುರುಗಳ ಅನುಮತಿಯನ್ನು ಪಡೆದು, ಶೀಘ್ರವಾಗಿ ವಾಪಾಸಾಗಬೇಕೆಂಬ ಆದೇಶದೊಂದಿಗೆ ನಂಜನಗೂಡಿಗೆ ಬಂದರು. ವೈಕುಂಠ ಸಮಾರಾಧನೆ, ಶುಭ ಸ್ವೀಕಾರದ ದಿನದಂದು ಆಚಾರ್ಯರಿಗೆ ವಿಪರೀತ ಜ್ವರದ ಬಾಧೆಯಾಯಿತು. ಮರುದಿನವೂ ಜ್ವರ ಉಲ್ಬಣಾವಸ್ಥೆಯಲ್ಲಿದ್ದರೂ ಶೀಘ್ರವಾಗಿ ವಾಪಸಾಗಬೇಕೆಂಬ ಗುರುಗಳ ಆದೇಶವನ್ನು ಪರಿಪಾಲಿಸುವ ತುಡಿತ ಅವರಲ್ಲಿತ್ತು. ಸಾಮಾನ್ಯವಾಗಿ ಪ್ರಯಾಣದ ಮುನ್ನ ತಮ್ಮ ತಾಯಿಯವರ ಅಪ್ಪಣೆ ಪಡೆದು ಅವರಿಂದ ರಾಯರ ಮಂತ್ರಾಕ್ಷತೆಯ ರಕ್ಷೆಯನ್ನು ಪಡೆಯುವುದು ಆಚಾರ್ಯರ ವಾಡಿಕೆ. ಆದರೆ ಇಂದು ವಾಡಿಕೆಯಂತೆ ತಾಯಿಯನ್ನು ಭೇಟಿಯಾಗಿ ಪ್ರಯಾಣದ ಸುದ್ದಿ ತಿಳಿಸಿದರೆ, ಜ್ವರಾವಸ್ಥೆಯಲ್ಲಿರುವ ತಮ್ಮನ್ನು ಬೀಳ್ಕೊಡಲೊಲ್ಲರು ಎಂಬ ಯೋಚನೆ ಮನದಲ್ಲಿ ಮಾಡಿತು. ಗುರುಗಳ ಆದೇಶ ಒಂದೆಡೆಯಾದರೆ, ತಾಯಿಯ ಅಪ್ಪಣೆಯಿಲ್ಲದೆ ಪ್ರಯಾಣಿಸಬೇಕಿರುವ ಸಂಧರ್ಭ ಮತ್ತೊಂದೆಡೆ. ತಾಯಿಯೇ ಮೊದಲ ಗುರುವಾದರೂ, ಮೊದಲ ಗುರುವಿಗೂ ಮೊದಲು ಜಗದ್ಗುರುಗಳ ಪೀಠವನ್ನಲಂಕರಿಸಿದ ತಮ್ಮ ಗುರುಗಳ ಆದೇಶವೆಂದು ಮನ್ನಿಸಿ ಯಾರಿಗೂ ತಿಳಿಸದಲೆ ಮಂತ್ರಾಲಯಕ್ಕೆ ಹೊರಡುವ ನಿರ್ಧಾರವನ್ನು ಕೈಗೊಂಡರು. ಅದರಂತೆ ತಮ್ಮ ಸಾಮಗ್ರಿಗಳನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಸೇರಿಸಿ ಮೈಸೂರು ಮಾರ್ಗವಾಗಿ ಬೆಂಗಳೂರಿನೆಡೆಗೆ ಪ್ರಯಾಣ ಬೆಳೆಸಿದರು.

ಆಚಾರ್ಯರು ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಬಂದರು. ಅಲ್ಲಿಂದ ಮಂತ್ರಾಲಯದ ಕಡೆಗೆ ಹೊರಡುವ ವಾಹನಕ್ಕಾಗಿ ಕಾಯಬೇಕಾಯಿತು. ಆ ಸಂದರ್ಭದಲ್ಲಿ ಟಿಕೆಟ್ ಕೊಡಿಸುವ ನೆಪದಲ್ಲಿ ದುಷ್ಟರು ಮೋಸಮಾಡಿ ಆಚಾರ್ಯರ ಬಳಿ ಇದ್ದ ದುಡ್ಡು, ಪೆಟ್ಟಿಗೆಯನ್ನು ಕಳವು ಮಾಡಿದರು. ಬಹುಶಃ ಭವಬಂಧನದಿಂದ, ಈ ವಿಷಯ ಪದಾರ್ಥಗಳಿಂದ ಆಚಾರ್ಯರನ್ನು ವಿಮುಕ್ತಿಗೊಳಿಸುವ ರಾಯರ ಆಕಾಂಕ್ಷೆಯ ಸೂಚನೆ ಇದಾಗಿತ್ತು. ಭಗವಂತ, ರಾಯರು ಸುಪ್ರಜ್ಞೇಂದ್ರಾಚಾರ್ಯರಿಗೆ ತಮ್ಮ ಮುಂದಿನ ವೈರಾಗ್ಯಜೀವನಕ್ಕೆ ಅಣಿಯಾಗಲು ತೋರಿದ ಮೊದಲ ಹಂತವಾಗಿತ್ತು ಈ ಘಟನೆ.

ಅಂದು ರಕ್ತಾಕ್ಷಿ ನಾಮ ಸಂವತ್ಸರದ ಫಾಲ್ಗುಣ ಕೃಷ್ಣ ಪಕ್ಷದ ದ್ವಾದಶಿಯ ದಿನ. ರಾಯರ ಸಂಕಲ್ಪಕ್ಕೆ ಅನುಗುಣವಾಗಿ ಶ್ರೀಸುಜಯೀಂದ್ರತೀರ್ಥರು ಯೋಜಿಸಿದ್ದ ಮಹತ್ಕಾರ್ಯದ ಬೀಜ ಮೊಳಕೆಯೊಡೆಯಿತು. ರಾಯಚೂರಿನಲ್ಲಿ ಶ್ರೀಸುಪ್ರಜ್ಞೇಂದ್ರಾಚಾರ್ಯರಿಗೆ ಸನ್ಯಾಸಾಶ್ರಮ ಸ್ವೀಕಾರಕ್ಕಾಗಿ ಅನುಗ್ರಹ ಮಂತ್ರಾಕ್ಷತೆಯನ್ನು ನೀಡಿಯೇ ಬಿಟ್ಟರು ಶ್ರೀಸುಜಯೀಂದ್ರತೀರ್ಥರು.

ಗುರುರಾಜರ ಅಂತರಂಗ ಭಕ್ತರಾದ ಶ್ರೀಅಪ್ಪಣ್ಣಾಚಾರ್ಯರ ದಿವ್ಯ ಬಿಚ್ಛಾಲಿ ಕ್ಷೇತ್ರದಲ್ಲಿ, 1985ನೇ ಇಸವಿ ಮಾರ್ಚ್ 19ನೇ ತಾರೀಖು, ಫಾಲ್ಗುಣ ಕೃಷ್ಣ ಪಕ್ಷದ ತ್ರಯೋದಶಿ ಶುಭದಿನದಂದು ವೈದಿಕವಿಧಿಪೂರ್ವಕವಾಗಿ, ಶ್ರೀಮಠದ ಅನೂಚಾನ ಸಂಪ್ರದಾಯದಂತೆ ಎಲ್ಲಾ ಪ್ರಕ್ರಿಯೆಗಳು ನಡೆದು ಶ್ರೀಸುಪ್ರಜ್ಞೇಂದ್ರಾಚಾರ್ಯರು ಸಂನ್ಯಾಸಾಶ್ರಮವನ್ನು ಸ್ವೀಕರಿಸಿದರು. ಗುರುಗಳಾದ ಶ್ರೀಸುಜಯೀಂದ್ರತೀರ್ಥರು ಇವರನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ, “ಶ್ರೀಸುಶಮೀಂದ್ರತೀರ್ಥ” ರೆಂದು ನಾಮಕರಣಮಾಡಿ ಮಂತ್ರೋಪದೇಶವನ್ನು ನೀಡಿ ಹರಸಿದರು.

“ಶಮೋ ಮನ್ನಿಷ್ಠತಾ ಬುದ್ಧೇಃ” ಎಂಬ ಉತ್ಪತ್ತಿಯಂತೆ ಶಮವೆಂದರೆ ಮನಸ್ಸು ಸರ್ವದಾ ಭಗವನ್ನಿಷ್ಠವಾಗಿರುವುದು. ಎಲ್ಲಾ ಜೀವರಲ್ಲೂ ಭಗವಂತನು ನಲೆಸಿರುವನೆಂದರಿತು ಎಲ್ಲರಿಗೂ ಒಳಿತನ್ನೇ ಬಯಸುವುದು. ಅಂತಹ ಶಮಗುಣವನ್ನು ಪಡೆದವರು – ಶಮಿಗಳು. ಅಂತಹ ಸು-ಶ್ರೇಷ್ಠವಾದ ಶಮಗುಣವನ್ನು ಹೊಂದಿದವರಲ್ಲಿ ಅಗ್ರಗಣ್ಯರು “ಸುಶಮೀಂದ್ರರು” ಎನಿಸಿಕೊಳ್ಳುವರು. ಇಂಥಹ ಶ್ರೇಷ್ಠ ಅರ್ಥವುಳ್ಳ ಅವರಿಗೆ ಅನ್ವರ್ಥಕವಾದ ನಾಮ ಇದಾಗಿತ್ತು.

ಪೀಠಾಧಿಪತಿಗಳು:

ಶ್ರೀ ಸುಶಮೀಂದ್ರರು ಪೀಠವನ್ನಲಂಕರಿಸಿದ ಆರಂಭದ ದಿನಗಳಲ್ಲಿ ಶ್ರೀ ಮಂತ್ರಾಲಯ ಕ್ಷೇತ್ರದಲ್ಲಿದ್ದುಕೊಂಡು ತಮ್ಮ ಜಪತಪಾನುಷ್ಠಾನಗಳನ್ನು, ಶ್ರೀ ಮೂಲರಾಮನ ಪೂಜೆಯನ್ನು, ಶ್ರೀಗುರುರಾಜರ ಸೇವೆಯನ್ನು ಮಾಡುತ್ತ ತಮ್ಮ ಗುರುಗಳು ಆಜ್ಞಾಪಿಸಿದ್ದ ಅವರ ಕಾಲದ ಯೋಜನೆಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರುವುದರಲ್ಲಿಯೇ ತಮ್ಮನ್ನು ತೊಡಗಿಸಿಕೊಂಡರು. ದಿನ ದಿನಕ್ಕೂ ಮಂತ್ರಾಲಯ ಕ್ಷೇತ್ರ ಅಭಿವೃದ್ದಿ ಕಾಣತೊಡಗಿತು. ಭಕ್ತರ ಸಂಖ್ಯೆಯು ಅಪಾರವಾಗಲು ಶುರುವಾಯಿತು, ಹಾಗೆ ಬರುವ ಎಲ್ಲ ಭಕ್ತರಿಗೂ ಎಲ್ಲ ರೀತಿಯ ಅನುಕೂಲಗಳು ದೊರೆಯಲೆಂದು ಉದ್ದೇಶಿಸಿ ಅನೇಕ ನೂತನವಾದ ವಸತಿಗೃಹಗಳ ನಿರ್ಮಾಣ ಮಾಡಿಸಿದರು. ಭಕ್ತಾದಿಗಳಿಗೆ ಗುರುರಾಜರ ದರ್ಶನಕ್ಕೆ ಸರತಿಯಲ್ಲಿ ದರ್ಶನ ಮಾಡುವ ವ್ಯವಸ್ಥೆಯನ್ನು ಮಾಡಿಸಿ ಅನುಕೂಲ ಕಲ್ಪಿಸಿದರು. ಪ್ರದಕ್ಷಿಣೆ ಹಾಕುವ ಪ್ರಾಕಾರಕ್ಕೆ ಮೇಲ್ಚಾವಣಿ ಹಾಕಿಸಿದರು. ಪ್ರಕಾರದಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದರು. ನದಿತೀರದಲ್ಲಿ ಶೌಚಾಲಯವನ್ನು, ಸ್ನಾನಗೃಹವನ್ನು ನಿರ್ಮಿಸಿದರು. ಗುರುರಾಜರ ದರ್ಶನಕ್ಕೆಂದು ಬರುವ ಎಲ್ಲ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ವಿಚಾರಿಸಿ ಶ್ರೀಗುರುರಾಜರು ನಿಮಗೆ ಒಳ್ಳೆಯದನ್ನು ಮಾಡುತ್ತಾರೆ ಎಂದು ತಮ್ಮ ನಗುಮೊಗದಿಂದ ಅಭಯವನ್ನು ನೀಡುತ್ತಿದ್ದರು. ಶ್ರೀರಾಯರ ದರ್ಶನ ಪಡೆದು ಶ್ರೀಗಳಿಂದ ಮಂತ್ರಾಕ್ಷತೆಯನ್ನು ಪಡೆದು ಅವರ ನಗು ಮುಖದ ಸಾಂತ್ವನದ ನುಡಿಗಳನ್ನು ಕೇಳಿದೊಡನೆಯೇ ಭಕ್ತರ ಕಷ್ಟಗಳ ನಿವಾರಣೆಯಾಗಹತ್ತಿತು. ಶ್ರೀಗಳವರ ಕೀರ್ತಿಯು ರಾಯರ ಅನುಗ್ರಹದಿಂದ ಎಲ್ಲೆಡೆ ಹರಡಿತು. ತಮ್ಮ ಗುರುಗಳು ಹಾಕಿದ್ದ ಭದ್ರ ಬುನಾದಿಯೊಂದಿಗೆ ಸ್ಥಾಪಿಸಿದ್ಧ ಶ್ರೀಗುರುಸಾರ್ವಭೌಮ ವಿದ್ಯಾಪೀಠವನ್ನೂ ಯಶಸ್ವಿಯಾಗಿ ನಡೆಸುತ್ತಿದ್ದರು. ಶ್ರೀಗಳು ತಮ್ಮ ಆಶ್ರಮೋಚಿತವಾದ ಆಚರಣೆಗಳನ್ನೂ, ಸಂಪ್ರದಾಯವನ್ನೂ ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದುದೇ ಅಲ್ಲದೆ ಆಡಳಿತವ್ಯವಹಾರವನ್ನು ನಿರಾಯಸವಾಗಿ ನಡೆಸಿಕೊಂಡು ಬರುತ್ತಿದ್ದರೂ ಸಹ ಅದರ ಲೇಪವೇ ತಮಗೆ ಅಂಟದಂತೆ ‘ನಾವಲ್ಲ ರಾಯರು’ ನಮ್ಮಲ್ಲಿ ನಿಂತು ಆ ಕೆಲಸ ಮಾಡಿಸುತ್ತಿದ್ದಾರೆ ಎಂದು ಹೇಳುತ್ತಾ ನಿರ್ಲಿಪ್ತ್ತರಾಗುತ್ತಿದ್ದರು.

 

ದಿಗ್ವಿಜಯ ಸಂಚಾರ:

ಶ್ರೀಸುಶಮೀಂದ್ರತೀರ್ಥರು ಮಂತ್ರಾಲಯದ ಅಭಿವೃದ್ಧಿಯನ್ನು ಒಂದು ಹಂತಕ್ಕೆ ಏರಿಸಿ, ದೇಶದ ಉದ್ದಗಲಕ್ಕೂ ಇರುವ ಶ್ರಿಗುರುರಾಜರ ಭಕ್ತರನ್ನು ಅನುಗ್ರಹಿಸುವ ಸಲುವಾಗಿ ಧರ್ಮ ಪ್ರಚಾರ ಕಾರ್ಯಕ್ಕಾಗಿ ಆಸೇತುಹಿಮಾಚ¯ ಪರ್ಯಂತವಾಗಿ ದಿಗ್ವಿಜಯಸಂಚಾರ ಮಾಡಿದರು. ಈ ದಿಗ್ವಿಜಯ  ಸಂಚಾರದ ಪಕ್ಷಿನೋಟ ಇಲ್ಲಿದೆ.

ಗರಳಪರೀ, ದಕ್ಷಿಣಕಾಶಿ, ಗೌತಮಕ್ಷೇತ್ರವೆಂದೆನಿಸಿದ ಕಪಿಲಾನದೀತೀರದಲ್ಲಿರುವ, ಪರಶುರಾಮ ಕ್ಷೇತ್ರವಾದ, ಪಾರ್ವತೀಸಮೇತ ಶ್ರೀಕಂಠೇಶ್ವರ ಕ್ಷೇತ್ರ ಹಾಗೂ ಶ್ರೀಗುರುರಾಜರು ಪ್ರತೀಕ ರೂಪದಲ್ಲಿ ನೆಲೆಸಿರುವ ಏಕೈಕ ಮತ್ತು ಜಗೃತಸ್ಥಳವಾದ ನಂಜನಗೂಡು, ಶ್ರೀರಂಗ, ಕುಂಭಕೋಣ, ಶ್ರೀಮುಷ್ಣಂ, ಮಧುರೈ, ರಾಮೇಶ್ವರ, ಕನ್ಯಾಕುಮಾರಿ ಮುಂತಾದ ದಕ್ಷಿಣ ಭಾರತ ತೀರ್ಥಯಾತ್ರೆ.

ರಜತಪೀಠಪುರವೆನಿಸಿದ ಉಡುಪಿ, ಪಾಜಕ, ಫಲಿಮಾರು, ಧರ್ಮಸ್ಥಳ, ಸುಬ್ರಮಣ್ಯ, ಸೌತಡ್ಕ, ಕಟೀಲು, ಮುಲ್ಕಿ, ಸೋಂದಾ ಮುಂತಾದ ಮುಖ್ಯ ಕರಾವಳೀ ತೀರ್ಥಸ್ಥಳಗಳು.

ಇನ್ನೂ ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ತಿರುಮಲಕ್ಕೆ ಮತ್ತು ತಿರುಚಾನೂರಿಗೆ ನೀಡಿದ ಪ್ರವಾಸಗಳಂತೂ ಅಸಂಖ್ಯ.

ಪಂಡರಪುರದ ಪಾಂಡುರಂಗ ಶ್ರೀಗಳವರಿಗೆ ಅತ್ಯಂತ ಪ್ರೀತಿಪಾತ್ರನಾದ ರೂಪ. ಪಂಡರಪುರಕ್ಕೆ ಗುರುಗಳು ಅನೇಕ ಬಾರಿ ಭೇಟಿಕೊಟ್ಟು ವಿಠ್ಠಲನ ಕೃಪೆಗೆ ಪಾತ್ರರಾಗಿದ್ದಾರೆ. ಹಾಗೆಯೇ ಕೊಲ್ಲೂರಿಗೂ ಅನೇಕ ಸಲ ಭೇಟಿಕೊಟ್ಟು ಶ್ರೀಮಹಾಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಪುಣೆ, ಮುಂಬೈ, ಹೈದರಾಬಾದ್, ನಾಗಪುರ ಮುಂತಾದ ಪ್ರಮುಖ ನಗರಗಳ ಭೇಟಿಯಂತೂ ಅನೇಕ.

ಉತ್ತರಭಾರತದ ತೀರ್ಥಪ್ರವಾಸವನ್ನು ಕೈಗೊಂಡು, ದೆಹಲಿ-ಕುರುಕ್ಷೇತ್ರ-ಕಾಶಿ-ಮಥುರಾ-ಗಯಾ-ಹರಿದ್ವಾರಗಳನ್ನು ಸಂದರ್ಶಿಸಿ, ಪರಮ ಪುಣ್ಯತಮವಾದ ಬದರೀಕ್ಷೇತ್ರವನ್ನು ಸಂದರ್ಶಿಸಿದರು. ಹಾಗೆಯೇ ನೈಮಿಷಾರಣ್ಯ, ಅಯೋಧ್ಯಾ, ಗಯಾ, ಕಾಶೀ, ಪ್ರಯಾಗ ಮುಂತಾದ ತೀರ್ಥಕ್ಷೇತ್ರಗಳ ಯಾತ್ರೆ ಮಾಡುತ್ತಾ ಅಲ್ಲಿಯ ಭಕ್ತರನ್ನೂ ಅನುಗ್ರಹಿಸಿದ್ದಾರೆ. ಶ್ರೀಮಠದ ಇತಿಹಾಸದಲ್ಲಿ ಎರಡು ಬಾರಿ ಬದರೀಯಾತ್ರೆಯನ್ನು ಪೂರೈಸಿದ ಕೀರ್ತಿ ಶ್ರೀ ಸುಶಮೀಂದ್ರತೀರ್ಥರದ್ದು.

ಅಭಿವೃದ್ಧಿ ಕಾರ್ಯಗಳು:

ಶ್ರೀಸುಶಮೀಂದ್ರತೀರ್ಥ  ಶ್ರೀಪಾದಂಗಳವರು ಪೀಠಾಧಿಪತಿಗಳಾಗಿ ದಿವ್ಯ ಪೀಠವನ್ನಲಂಕರಿಸಿದ ಮೇಲೆ 1987 ರಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿರುತ್ತಾರೆ. ಸುಮಾರು 11 ಕೆ.ಜಿ. ಬಂಗಾರದಲ್ಲಿ ಶ್ರೀ ರಾಯರಿಗೆ ಬಂಗಾರದ ರಥ, ಶ್ರೀ ಮೂಲರಾಮದೇವರ ಪೂಜೆಗಾಗಿ ಸುಮಾರು ಇಪ್ಪತ್ತು ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿ 2 ಕೆ.ಜಿ. ಬಂಗಾರದಲ್ಲಿ ಶ್ರೀಮೂಲರಾಮದೇವರಿಗೆ ಸಿಂಹಾಸನದ ನಿರ್ಮಾಣ, ರಾಯರ ಮೂಲಪಾದುಕೆಗಳಿಗೆ ಬಂಗಾರದ ಕವಚ ನಿರ್ಮಾಣ, ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ 336ನೇ ಆರಧನಾ ಸಂದರ್ಭದಲ್ಲಿ ಉತ್ಸವಕ್ಕಾಗಿ ಸುಮಾರು ಹನ್ನೆರಡು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಬೆಳ್ಳಿಯ ಅಂಬಾರಿಯನ್ನು ನಿರ್ಮಾಣ, ಸುಮಾರು ಹದಿನೇಳು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೂತನ ಮಹಾರಥದ ನಿರ್ಮಾಣ, ರಾಯರಿಗೆ ಅಂದಾಜು ಹತ್ತು ಕೆ.ಜಿ ಬಂಗಾರದ ಪಲ್ಲಕ್ಕಿಯ ನಿರ್ಮಾಣ, ಮಂತ್ರಾಲಯದ ರಾಯರ ಮೂಲಬೃಂದಾವನಕ್ಕೆ ಸಂಪೂರ್ಣವಾಗಿ ಬಂಗಾರದ ಕವಚದ ನಿರ್ಮಾಣ, ರಾಯರ ಗರ್ಭಗುಡಿಯ ಪ್ರಾಂಗಣದ ಸಂಪೂರ್ಣ ನವೀಕರಣ, ಪ್ರಾಚೀನವಾದ ಕಂಬಗಳಿಗೆ ಬೆಳ್ಳಿಯ ಕವಚಗಳ ನಿರ್ಮಾಣಗಳನ್ನು ಮಾಡಿಸಿದ್ದಾರೆ.

ಮಂತ್ರಾಲಯ ಮಹಾಪ್ರಾಕಾರದಲ್ಲಿ ಒಂದು ಕೋಟಿ ಇಪ್ಪತೈದು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶ್ರೀಪೂರ್ಣಬೋಧ ಪೂಜಾಮಂದಿರವನ್ನು ನಿರ್ಮಾಣ ಮಾಡಿರುತ್ತಾರೆ. ಮಂತ್ರಾಲಯಕ್ಕೆ ಬರುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಇನ್ಫೋಸಿಸ್ ಸಹಯೋಗದಿಂದ ಸುಮಾರು ಒಂದು ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿ ಉತ್ತಮವಾದ ಅನ್ನಪೂರ್ಣ ಭೋಜನಶಾಲೆಯನ್ನು ನಿರ್ಮಾಣ ಮಾಡಿರುತ್ತಾರೆ. ಮಂತ್ರಾಲಯ ಕ್ಷೇತ್ರಕ್ಕೆ ರಾಯರ ದರ್ಶನಾಕಾಂಕ್ಷಿಗಳಾಗಿ ಬಂದ ಯಾತ್ರಿಕರಿಗೆ ಉಚಿತ ಭೋಜನದ ವ್ಯವಸ್ಥೆಯನ್ನು ಮಾಡಿರುತ್ತಾರೆ.

ಮಂತ್ರಾಲಯದ ಮಹಾಪ್ರಾಕಾರದ ಬಲಭಾಗದಲ್ಲಿ ಭಕ್ತರೊಬ್ಬರ ಸಹಾಯದಿಂದ ಸುಮಾರು 3 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ರಂಗಭವನ ಎನ್ನುವ ಭೋಜನ ಶಾಲೆಯ ನಿರ್ಮಾಣ, ಸುಸಜ್ಜಿತವಾದ 250 ಕ್ಕೂ ಹೆಚ್ಚು ವಸತಿಗೃಹಗಳು, ಹತ್ತಾರು ಕಲ್ಯಾಣಮಂಟಪಗಳು, ಆಧುನಿಕ ವ್ಯವಸ್ಥೆಯ ಗೋಶಾಲೆ, ಆರೋಗ್ಯಶಾಲೆ, ತುಂಗಭದ್ರಾನದೀ ತಟದಲ್ಲಿ ಸುರಕ್ಷಿತ ಸ್ನಾನದ ವ್ಯವಸ್ಥೆ – ಹೀಗೆ ಎಲ್ಲವೂ ರಾಯರ ಭಕ್ತರ ಅನುಕೂಲಕ್ಕಾಗೆ ಮೀಸಲಾಗಿದೆ.

ಚಿಪ್ಪಗಿರಿಯ ಶ್ರೀ ವಿಜಯದಾಸರ ಕಟ್ಟೆಗೆ ನಾಲ್ಕು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಂಪೂರ್ಣ ಬೆಳ್ಳಿಯ ಕವಚ ನಿರ್ಮಾಣ, ಪಾದಯಾತ್ರೆಯ ಮೂಲಕ ಹಣ ಸಂಗ್ರಹಿಸಿ, ಗುಜರಾತ್ ಭೂಕಂಪ ನಿಧಿಗೆ ನೀಡಿದ್ದು, ಸುನಾಮಿ ದುರಂತದ ಸಂದರ್ಭದಲ್ಲಿ ಶ್ರಿಮಠದಿಂದ ನಾಗಪಟ್ಟಣಮ್‍ನಲ್ಲಿ ಒಂದು ತಿಂಗಳ ಕಾಲ ಪ್ರತಿದಿನ ಐದು ಸಾವಿರ ಜನಕ್ಕೆ ಊಟದ ವ್ಯವಸ್ಥೆ, ಉಚಿತ ವೈದ್ಯಕೀಯ ವ್ಯವಸ್ಥೆ ಹಾಗೂ ಸೀರೆ ಪಂಚೆಗಳ ವಿತರಣೆ – ಹೀಗೆ ಸಾಮಾಜಿಕವಾಗಿ ಶ್ರೀಮಠ ತೊಡಗಿಕೊಂಡು ರಾಯರ ಅನುಗ್ರಹರಕ್ಷೆಯನ್ನು ಭಕುತರ ಮನ-ಮನೆಗಳಿಗೆ ತಲುಪಿಸಿದ ಕೀರ್ತಿ ಶ್ರೀಶ್ರೀಸುಶಮೀಂದ್ರತೀರ್ಥರದ್ದು.

ವಿದ್ಯಾಮಠ:

ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನವಾದ, ಶ್ರೀರಾಘವೇಂದ್ರಗುರುಸಾರ್ವಭೌಮರ ಮಠಕ್ಕೆ ಇರುವ ಮತ್ತೊಂದು ಹೆಸರು – ವಿದ್ಯಾಮಠ ಎಂದು. ಅದಕ್ಕೆ ತಕ್ಕಂತೆ ಈ ವೇದಾಂತಸಾಮ್ರಾಜ್ಯವನ್ನಾಳಿದ ಎಲ್ಲಾ ಯತೀರ್ಶವರರೂ ವೇದಾಂತವಿದ್ಯೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಶ್ರೀಶ್ರೀಸುಶಮೀಂದ್ರತೀರ್ಥರೂ ಸಹ ಈ ದಿಕ್ಕಿನಲ್ಲಿ ಅನೇಕ ರೀತಿಯಾದ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.

ಪ್ರಾಚೀನಕಾಲದಿಂದಲೂ ನಡೆದು ಬಂದ ಸಂಸ್ಕೃತ ಶಾಸ್ತ್ರಾಭ್ಯಾಸಕ್ಕಾಗಿ ಇರುವ ಶ್ರೀಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠಕ್ಕೆ 60 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶಾಲಾ ಕೊಠಡಿಗಳನ್ನು ವಿದ್ಯಾರ್ಥಿ ನಿಲಯವನ್ನು ನಿರ್ಮಾಣ ಮಾಡಿ ಮುನ್ನೂರಕ್ಕೂ ಹೆಚ್ಚು  ವಿದ್ಯಾರ್ಥಿಗಳಿಗೆ ಸಂಸ್ಕೃತ ವಿದ್ಯಾಭ್ಯಾಸವನ್ನು ಮಾಡಲು ವ್ಯವಸ್ಥೆ ಮಾಡಿದರು. ಅಷ್ಟೇ ಅಲ್ಲದೆ, ರಾಷ್ಟ್ರದ ಮುಖ್ಯ ನಗರಗಳಾದ ಬೆಂಗಳೂರು, ಚೆನ್ನೈ, ಹೈದರಾಬಾದ್, ಪೂನಾ, ಬಾಂಬೆ ಮುಂತಾದ ಕಡೆಗಳಲ್ಲಿ ಈ ವಿದ್ಯಾಪೀಠದ ಶಾಖೆಗಳನ್ನು ಪ್ರೋತ್ಸಾಹಿಸಿ ನಡೆಸಿದರು.

ಪಂಡಿತಪೋಷಣೆ ಶ್ರೀಗಳವರಲ್ಲಿದ್ದ ಸ್ವಾಭಾವಿಕ ಗುಣ. ಪಂಡಿತರು ಕಂಡರೆ, ಅವರ ಶ್ರಮ-ಸಾಧನೆಗಳನ್ನು ಕೊಂಡಾಡುತ್ತಾ ಪಂಡಿತರ ಹಸ್ತ ತುಂಬುವಷ್ಟೂ ಸಂಭಾವನೆ ನೀಡುವುದು ಅವರ ಔದಾರ್ಯಕ್ಕೆ ಸಾಕ್ಷಿ.  ಪೀಠಾಧೀಶ್ವರರಾದರೂ ಇಂತಹ ಸರಳ ವ್ಯಕ್ತತ್ವ ಕಾಣುವುದು ಅಪರೂಪ.

ಶ್ರೀಸುಶೀಲೇಂದ್ರತೀರ್ಥರ ಕಾಲದಲ್ಲಾರಂಭವಾದ ಶ್ರೀಮತ್ಸಮೀರಸಮಯಸಂವರ್ಧಿನೀ ವಿದ್ವತ್ಸಭೆಯನ್ನು ಇನ್ನೂ ಹೆಚ್ಚಿನ ವೈಭವದಿಂದ ನೆರೆವೇರಿಸಲು ಆರಂಭಿಸಿದರು. ಚಾಚೂ ತಪ್ಪದೇ ಪ್ರತಿ ವರ್ಷವೂ ಈ ಸಭೆಯು ನಡೆದು – ತ್ರಿಮತಸ್ಥರಿಗೂ ಜ್ಞಾನಸುಧೆಯ ರಸದೌತಣವಾಗುತ್ತಿತ್ತು.

ಗ್ರಂಥಪ್ರಕಾಶನ:

ಶ್ರೀಸುಶಮೀಂದ್ರತೀರ್ಥರ ಕಾಲವು ಶ್ರೀಮಠದ ಇತಿಹಾಸದಲ್ಲೇ ಗ್ರಂಥಪ್ರಕಾಶನ ಕಾರ್ಯದಲ್ಲಿ ದಾಖಲೆಯನ್ನು ಬರೆದ ಕಾಲ. ಹಲವಾರು ಪ್ರಾಚೀನ ಹಸ್ತಪ್ರತಿ, ಗ್ರಂಥಗಳನ್ನು ಸಂಗ್ರಹಿಸಿ, ಪ್ರಕಟಿಸುವ ಯೋಜನೆಗಳನ್ನು ಮಾಡುತ್ತಾ ಸುಮಾರು 200ಕ್ಕೂ ಹೆಚ್ಚು ಗ್ರಂಥಗಳನ್ನು ಶ್ರೀಮಠವು ಪ್ರಕಟಗೊಳಿಸಿದೆ. 2004ರ ಶ್ರೀರಘುನಂದನತೀರ್ಥರ ಪಂಚಶತಮಾನೋತ್ಸವ ಆರಾಧನಾ ಮಹೋತ್ಸವದಂದು ಏಕಕಾಲಕ್ಕೆ 101 ಗ್ರಂಥಗಳನ್ನು ಪ್ರಕಟಗೊಳಿಸಿ ದಾಖಲೆಯನ್ನು ಬರೆದದ್ದು ಶ್ರೀಸುಶಮೀಂದ್ರತೀರ್ಥರ ನೇತೃತ್ವದಲ್ಲಿ. ಪ್ರಾಚೀನ ಸಂಸ್ಕøತ ಗ್ರಂಥಗಳ ಜೊತೆಗೆ, ದಾಸಸಾಹಿತ್ಯಕ್ಕೆ ಸಂಬಂಧಪಟ್ಟಂತಹ ಅನೇಕ ಕೃತಿಗಳನ್ನು ಹೊರತಂದಿದೆ. ಶ್ರೀಮಠದ ಪೂರ್ವೀಕ ಗುರುಗಳಾದ ಶ್ರೀಜಯತೀರ್ಥರಿಂದ ರಚಿತವಾದ ಶ್ರೀಮನ್ನ್ಯಾಯಸುಧಾ ಗ್ರಂಥಕ್ಕೆ ಸುಮಾರು ಇಪ್ಪತ್ತೈದು ಟಿಪ್ಪಣಿಗಳನ್ನೊಳಗೊಂಡ ಇಪ್ಪತ್ತೈದು ಸಂಪುಟಗಳನ್ನು ಮುದ್ರಿಸಿಲಾಗಿದೆ. ಅಷ್ಟೇ ಅಲ್ಲದೆ, ಶ್ರೀಗಳವರ ಆಜ್ಞೆಯಂತೆ, ಮಠಭೇಧ ವಿಲ್ಲದೆ ಯೋಗ್ಯ ಶಾಸ್ತ್ರಾಭ್ಯಾಸಿಗಳಿಗೆ ಈ ಬೃಹತ್ ಪುಸ್ತಕಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿತ್ತು.

34ವರ್ಷಗಳಿಂದ ಪ್ರಕಟಗೊಳ್ಳುತ್ತದ್ದ ಶ್ರೀ ಗುರುಸಾರ್ವಭೌಮ ಎನ್ನುವ ಕನ್ನಡ ಮಾಸಪತ್ರಿಕೆಗೆ ಹೊಸ ರೂಪವನ್ನು ಕೊಟ್ಟು 10 ಸಾವಿರಕ್ಕೂ ಹೆಚ್ಚು ಚಂದಾದಾರರನ್ನು ಹೊಂದುವಂತಾಯಿತು. ದಾಸಸಾಹಿತ್ಯಕ್ಕಾಗಿ ವಿಜಯಸಂಪದ ಎನ್ನುವ ಮಾಸಪತ್ರಿಕೆಯನ್ನು ಪ್ರಾರಂಭ ಮಾಡಿದ್ದರು ಶ್ರೀಸುಶಮೀಂದ್ರತೀರ್ಥ ಶ್ರೀಪಾದರು.

 

ರಾಯರ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನೆ:

ಕಲಿಯುಗ ಕಲ್ಪತರು, ಕಾಮಧೇನು ಶ್ರೀ ರಾಘವೇಂದ್ರ ಗುರುಸಾರ್ವಭೌಮರು ಮಂತ್ರಾಲಯ ಕ್ಷೇತ್ರದಲ್ಲಿ ಸಜೀವ ವೃಂದಾವನರಸ್ಥರಾಗಿ ಇಂದಿಗೂ ಭಕುತಿಯಿಂದ ಬಂದ ಭಕುತರ ಆರಾಧಕರಾಗಿದ್ದಾರೆ. ಆ ಭಕುತರ ನೋವಿನ ನಿವಾರಕರಾಗಿದ್ದಾರೆ. ಇಷ್ಟಾರ್ಥ ಫಲದಾಯಕರಾಗಿದ್ದಾರೆ. ರಾಯರ ಭಕುತ ವೃಂದಗಣ ದೇಶದ ನಾನಾ ಭಾಗಗಳಲ್ಲಿ ವಾಸವಾಗಿದ್ದು ಎಲ್ಲರೂ ನಿರಂತರವಾಗಿ ಮಂತ್ರಾಲಯ ಕ್ಷೇತ್ರ ಯಾತ್ರೆ ಮಾಡಲು ಕಷ್ಟದ ವಿಚಾರ. ಈ ಸಮಸ್ಯೆಯನ್ನರಿತ, ರಾಯರ ಕರುಣೆಯ ಕಂದ ಶ್ರೀಸುಶಮೀಂದ್ರತೀರ್ಥರು ದೇಶದ ಉದ್ದಗಲಕ್ಕೆ ಸಂಚರಿಸಿ, ಭಕುತ ವೃಂದಗಳನ್ನು ಒಂದುಗೂಡಿಸಿ, ಅಲ್ಲಲ್ಲಿ ರಾಯರ ಮೃತ್ತಿಕಾ ವೃಂದಾವನಗಳನ್ನು ಪ್ರತಿಷ್ಠಾಪಿಸಿದ್ದಾರೆ. ಕರ್ನಾಟಕ, ತಮಿಳ್ನಾಡು, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶವೇ ಮೊದಲಾಗಿ, ಉತ್ತರಭಾರತದಲ್ಲೂ ಸಹ ರಾಯರ ಅಧಿಷ್ಠಾನವನ್ನು ಪ್ರತಿಷ್ಠೆ ಮಾಡಿ, ಅಲ್ಲಲ್ಲಿನ ಭಕುತರು ರಾಯರನ್ನು ನಿತ್ಯದಲ್ಲೂ ಸೇವಿಸುವ, ರಾಯರ ಕರುಣಾಶ್ರಯದಲ್ಲಿರುವ ಅವಕಾಶವನ್ನು ಒದಗಿಸಿ ಸಮಾಜದ ಧರ್ಮ ಮಾರ್ಗ ನಡೆಗೆ ದಾರಿಯನ್ನು ತೋರಿಸಿದ್ದಾರೆ. ಈ ರೀತಿಯಾದ ರಾಯರ ಪ್ರತಿಷ್ಠಾಪನಾ ಪರ್ವವು ಶತಕವನ್ನು ಮುಟ್ಟಿರುವುದು ‘ನ ಭೂತೋ ನ ಭವಿಷ್ಯತಿ’ ಎಂಬ ದಾಖಲೆಯೇ ಸರಿ.

 

ಬೇಡಿದ್ದನ್ನು ಅನುಗ್ರಹಿಸುವ ರಾಯರ ಅನುಗ್ರಹ ಪಾತ್ರರು:

ಶ್ರೀಸುಶಮೀಂದ್ರತೀರ್ಥರು ರಾಯರ ಪರಮಭಕ್ತರು. ರಾಯರು ಇವರಿಗೆ ಆಪ್ತರು. ರಾಯರ ನಾಮಸ್ಮರಣೆಯೇ ಶ್ರೀಗಳ ಶಕ್ತಿ. ಮುಗ್ಧ ಮಂದಹಾಸ ಶ್ರೀಸುಶಮೀಂದ್ರರ ಚಿಹ್ನೆ. ಗುರುಗಳ ಮಂದಸ್ಮಿತ ವದನ ಎಲ್ಲ ಭಕುತರ ಕಷ್ಟಕಾರ್ಪಣ್ಯಗಳನ್ನು ಒಮ್ಮೆಲೇ ದೂರಗೊಳಿಸುವ ಸಾಧನ. ಹೀಗೆ ರಾಯರ ಅನುಗ್ರಹ ಬಲದಿಂದ ಶ್ರೀಗಳವರು ಅನುಗ್ರಹಿಸಿದ ಮಂತ್ರಾಕ್ಷತೆ, ಮಾಡಿದ ಆಶೀರ್ವಾದ ಫಲಪ್ರದ. ಅನೇಕ ಭಕ್ತರಿಗೆ ಮಂತ್ರಾಕ್ಷತಾಬಲದಿಂದ, ಗುರುಗಳು ನುಡಿದ ಆಶೀರ್ವಾದದ ಮಾತಿನಿಂದ ಆದ ಅನೇಕ ಅನುಭವಗಳುಂಟು. ಈ ಅನುಭವಗಳು ಜಾತಿ ಮತ ಭೇದವಿಲ್ಲದೆ ಎಲ್ಲಾ ಜನರಲ್ಲೂ ಆದದ್ದುಂಟು. ವಿಚಿತ್ರವಾದ ಈ ಅನುಭವಗಳೆಲ್ಲವನ್ನೂ ‘ಗುರುರಾಜರು ನಿಂತು ನಡೆಸಿದ್ದು’, `ರಾಯರು ಮಾಡಿಸಿದ್ದು’ ಎಂದೇ ಹೇಳುತ್ತಿದ್ದರು ಶ್ರೀ ಸುಶಮೀಂದ್ರ ಗುರುಗಳು.

ಅನುಗೃಹೀತರಾದ ಭಕುತರ ಪಟ್ಟಿಯನ್ನು ಹೇಳಬೇಕಾದರೆ, ಘಟನೆಗಳನ್ನು ತಿಳಿಸಬೇಕಾದರೆ, ಅದೇ ಒಂದು ಬೃಹತ್ ಗ್ರಂಥವಾದೀತು. ಒಟ್ಟಿನಲ್ಲಿ ಶ್ರೀಸುಶಮೀಂದ್ರತೀರ್ಥರು ಅನುಗ್ರಹಿಸಿದೆ ರಾಯರ ಮಂತ್ರಾಕ್ಷತಾ ಬಲದಿಂದ ಎಷ್ಟೋ ಭಕುತರ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಿವೆ, ಮದುವೆಯಾಗದಿದ್ದವರಿಗೆ ಮದುವೆಯಾಗಿದೆ, ಒಳ್ಳೆಯ ಸಂತಾನಾಪೇಕ್ಷೆಯುಳ್ಳವರಿಗೆ ಸಂತಾನವಾಗಿವೆ, ವ್ಯವಹಾರದಲ್ಲಿ ಸಮಸ್ಯೆ ಇದ್ದವರಿಗೆ ಅದರ ನಿವಾರಣೆಯಾಗಿ ಅಭಿವೃದ್ಧಿಯಾಗಿದೆ. ಅಷ್ಟೇ ಅಲ್ಲ, ಶ್ರೀಗಳ ಅಂತಃಸತ್ವವನ್ನರಿಯದ ಹಾಗೂ ಶ್ರೀಗಳವರನ್ನು ಪರೀಕ್ಷಿಸಲು ಬಂದ ಕೆಲವು ಮಂದಿಗಂತೂ ಬೂದಿ ಮುಚ್ಚಿದ ಕೆಂಡದಂತಿದ್ದ ಶ್ರೀಗಳ ನಿಜವಾದ ಪರಿಚಯವಾಗಿ, ಅವರ ದುರಹಂಕಾರ ಅಡಗಿದೆ.

ಮಳೆಇಲ್ಲದ ಕಡೆ ಶ್ರೀಗಳವರ ಪ್ರಾರ್ಥನೆಯಿಂದ ಉತ್ತಮ ಮಳೆಯಾದ ಹಾಗೂ ಕಾರ್ಯಕ್ರಮದ ಸಮಯದಲ್ಲಿ ಮಳೆರಾಯ ಅಡ್ಡಿಪಡಿಸುವ ಸಂಧರ್ಭಬಂದಾಗ ಶ್ರೀಗಳವರ ಪ್ರಾರ್ಥನೆಯಿಂದ ವರುಣದೇವ ಮಳೆಯನ್ನು ತಡೆಹಿಡಿದ ಘಟನೆಗಳು ಬೇಕಾದಷ್ಟಿವೆ. ಇದರಿಂದ ಭಕುತರು ಇವರನ್ನು ‘ಮಳೆಸ್ವಾಮಿ’ ಎಂತಲೇ ಕರೆಯುತ್ತಿದ್ದುದುಂಟು.

 

ಮಠ-ಮಠಗಳ ಬಾಂಧವ್ಯ:`

ಶ್ರೀಸುಶಮೀಂದ್ರತೀರ್ಥರು ಸ್ವಾಭಾವಿಕವಾಗಿಯೇ ಪ್ರೀತಿ, ವಿಶ್ವಾಸ, ಅಭಿಮಾನ, ಅಂತಃಕರಣವುಳ್ಳಂತಹ ಸುಗುಣಶಾಲಿಗಳು. ತಮ್ಮ ಗುರುಗಳು ಹಾಕಿಕೊಟ್ಟ ಮಾರ್ಗವನ್ನೇ ಅನುಸರಿಸುತ್ತಾ ನಾಡಿನ ಎಲ್ಲಾ ಮಠಾಧೀಶರೊಂದಿಗೂ ಅನನ್ಯವಾದ ಸ್ನೇಹ, ಸೌಹಾರ್ದವನ್ನು ಹೊಂದಿದ್ದರು. ಶ್ರೀವ್ಯಾಸರಾಜ ಮಹಾ ಸಂಸ್ಥಾನದ ಶ್ರೀವಿದ್ಯಾಪಯೋನಿಧಿತೀರ್ಥರು, ಶ್ರೀವಿದ್ಯಾವಾಚಸ್ಪತಿತೀರ್ಥರೊಂದಿಗಿನ ಉತ್ತಮ ಬಾಂಧವ್ಯ ಅಣ್ಣತಮ್ಮಂದಿರಂತೆ ಇತ್ತು. ಶ್ರೀಪಾದರಾಜ ಮಠದ ಶ್ರೀವಿಜ್ಞಾನನಿಧಿತೀರ್ಥರಂತೂ ಶ್ರೀಸುಶಮೀಂದ್ರತೀರ್ಥರಿಗೆ ಅಚ್ಚುಮೆಚ್ಚು. ಮುಳಬಾಗಿಲ ಶ್ರೀಪಾದರಾಜ ಮಠ ಶ್ರೀಗಳವರಿಗೆ ತವರು ಮನೆಯಂತಿತ್ತು. ಉತ್ತರಾದಿ ಮಠದ ಶ್ರೀಸತ್ಯಪ್ರಮೋದ ತೀರ್ಥರು ಹಾಗೂ ಶ್ರೀಸತ್ಯಾತ್ಮತೀರ್ಥರಲ್ಲೂ ಉತ್ತಮ ಸಂಬಂಧವಿತ್ತು. ಶ್ರೀಗಳವರು ಉಡುಪಿಯ ಶ್ರೀಕೃಷ್ಣನ ಪ್ರೀತಿಪಾತ್ರರು, ಶ್ರೀಕೃಷ್ಣ ಶ್ರೀಗಳವರ ಭಕ್ತಿಪಾತ್ರ. ಆದ್ದರಿಂದ ಉಡುಪಿಯ ಅಷ್ಟಮಠಗಳ ಯತಿಗಳಿಗೂ ಶ್ರೀಸುಶಮೀಂದ್ರತೀರ್ಥರಲ್ಲಿ ಅತ್ಯತ್ತಮ ವಿಶ್ವಾಸ. ಹೆಚ್ಚಾಗಿ, ಜ್ಞಾನಿವರೇಣ್ಯರೆಂದೆನಿಸಿದ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರಿಗೆ ಶ್ರೀಸುಶಮಿಂದ್ರತೀರ್ಥರೆಂದರೆ ಅತ್ಯಂತ ಪ್ರೀತಿ. ಒಮ್ಮೆ ಸಮಾರಂಭವೊಂದರಲ್ಲಿ, ಶ್ರೀವಿದ್ಯಾಮಾನ್ಯ ಶ್ರೀಪಾದರು ಶ್ರೀಸುಶಮೀಂದ್ರತೀರ್ಥರನ್ನೇ ದಿಟ್ಟಿಸಿ ನೋಡುತ್ತಿದ್ದರು. ಸಮಾರಂಭದ ಬಳಿಕ ಶಿಷ್ಯರು ಕೇಳದಾಗ, ಶ್ರೀವಿದ್ಯಾಮಾನ್ಯರು ಹೇಳಿದ್ದು ಹೀಗೆ – “ನಾನು ಇಂದು ಶ್ರೀಸುಶಮೀಂದ್ರರಲ್ಲಿ ರಾಯರನ್ನು ಕಾಣುತ್ತಿದ್ದೆ”. ಜ್ಞಾನಿಗಳ ಆಂತರ್ಯ ಜ್ಞಾನಿಗಳಗೆ ಮಾತ್ರ ಅರಿಯಲು ಸಾಧ್ಯ. ಶ್ರೀವಿದ್ಯಾಮಾನ್ಯ ಶ್ರೀಪಾದರು ತಮ್ಮ ಅಂತ್ಯಕಾಲದಲ್ಲಿ ಆರೋಗ್ಯಸರಿಯಿಲ್ಲದಿದ್ದಾಗ, ಶ್ರೀಸುಶಮೀಂದ್ರತೀರ್ಥರನ್ನು ನೋಡುವ ಹಂಬಲ ವ್ಯಕ್ತಪಡಿಸಿದರಂತೆ. ಅದರಂತೆ ಶ್ರೀಸುಶಮೀಂದ್ರತೀರ್ಥರು ಶ್ರೀವಿದ್ಯಾಮಾನ್ಯರನ್ನು ಭೇಟಿಯಾದಾಗ ಶ್ರೀಸುಶಮೀಂದ್ರರ ಹಸ್ತವನ್ನು ಹಿಡಿದು ತಮ್ಮ ಎದೆಗೆ ಸವರಿದರಂತೆ. ಜ್ಞಾನಿಗಳ ಈ ರೀತಿಯ ವರ್ತನೆಯ ಅಂತರಂಗ ಪಾಮರರಾದ ನಮಗೆ ಬಹಿರಂಗವಾಗುವುದ ಬಹಳವೇ ಕಷ್ಟ.

ವಾಮನರೂಪದ ತ್ರಿವಿಕ್ರಮ ಸಾಮಥ್ರ್ಯದ ಸನ್ಯಾಸಿಗಳು ಪೇಜಾವರಮಠಾಧೀಶರಾದ ಶ್ರೀವಿಶ್ವೇಶತೀರ್ಥಶ್ರೀಪಾದರು. ಇವರು ಮತ್ತು ಶ್ರೀಸುಶಮೀಂದ್ರತೀರ್ಥರಲ್ಲಿ ಅತ್ಯಂತವಾದ ಸ್ನೇಹ. ಉಭಯಶ್ರೀಪಾದರೂ ತಮ್ಮ ತಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ತಪ್ಪದೇ ಉಪಸ್ಥಿತರಿರುತ್ತಿದ್ದುದೇ ಇದಕ್ಕೆ ಸಾಕ್ಷಿ. ಫಲಿಮಾರು ಮಠದ ಶ್ರೀವಿದ್ಯಾದೀಶ ತೀರ್ಥರು ಶ್ರೀಸುಶಮೀಂದ್ರತೀರ್ಥರ ಅತ್ಯಂತ ಅಭಿಮಾನಿ ಎಂದರೆ ತಪ್ಪಾಗಲಾರದು.

ಬೃಂದಾವನ ಪ್ರವೇಶ:

ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀರಾಘವೇಂದ್ರ ಸ್ವಾಮಿ ಮಠ ಜಾತಿ-ಮತ-ಪಂಥವಿಲ್ಲದಂತೆ ಎಲ್ಲರನ್ನೂ ಪೊರೆಯುತ್ತಾ ಬಂದಿರುವ, ಸಮಾಜಮುಖಿಯಾದ ವಿದ್ಯಾಮಠ. ಇಂತಹ ಮಠದ ಪೀಠಾಧೀಶ್ವರರಾಗುವುದ ಸಾಮಾನ್ಯದ ಸಂಗತಿಯೇನಲ್ಲ. ಹಾಗಿದ್ದರೂ ತಮ್ಮ 25 ವರುಷಗಳ ಸಂನ್ಯಾಸ ಜೀವನವನ್ನು ಭಗವಂತವನ ಪೂಜಾತ್ಮಕವಾಗಿ ಯಶಸ್ವಿಯಾಗಿ ನಿರ್ವಹಿಸಿದ ಸಾಧನೆ ಶ್ರೀಸುಶಮೀಂದ್ರತೀರ್ಥರದು.

 

ಶ್ರೀಸುಶಮಿಂದ್ರತೀರ್ಥರು ಶ್ರೀಮಠದ ಉತ್ತಮ ವಿದ್ವಾಂಸರಾದ, ಭಾಗವತಪ್ರವಚನಚತುರರಾದ, ಶ್ರೀಪೂರ್ಣಪ್ರಜ್ಞವಿದ್ಯಾಪೀಠದ ಅಧ್ಯಾಪಕರಾಗಿದ್ದ ವಿದ್ವಾನ್ ಗುರುವೇಂಕಾಟಾಚಾರ್ಯರಿಗೆ ಸನ್ಯಾಸಾಶ್ರಮವನ್ನು ಪ್ರದಾನ ಮಾಡಿ ಶ್ರೀಸುವಿದ್ಯೇಂದ್ರತೀರ್ಥರೆಂದು ನಾಮಕರಣ ಮಾಡಿದರು. ಶ್ರೀಸುವಿದ್ಯೇಂದ್ರತೀರ್ಥರು ತಮ್ಮ ಗುರುಗಳ ಸೇವೆಯನ್ನು ಮಾಡುತ್ತಾ, ಮಧ್ವಮತದ ಪ್ರಚಾರವನ್ನು ಮಾಡುತ್ತಾ, ಶ್ರೀಭಾಗವತ ಪ್ರವಚನವನ್ನು ಮಾಡುತ್ತಿರುವುದು ಒಂದು ದೊಡ್ಡ ದಾಖಲೆಯೇ ಸರಿ.

 

ಶ್ರೀಸುಶಮೀಂದ್ರತೀರ್ಥರಿಗೆ ತಮ್ಮ ವಯೋ ಸಹಜಧರ್ಮದಿಂದಾಗಿ ದೇಹಾಲಸ್ಯವಾದಾಗ, ಅವಿಚ್ಛಿನವಾದ ಪರಂಪರೆಗೂ ಶ್ರೀ ಮೂಲರಾಮರ ಪೂಜೆಗೂ ಕುಂದುಂಟಾಗಬಾರದೆಂದು ಯೋಚಿಸಿ ಶ್ರೀ ಗುರುರಾಜರಲ್ಲಿ ಪ್ರಾರ್ಥಿಸಿ, ಶ್ರೀರಾಯರ ಸೂಚನೆಯಂತೆ ತಮ್ಮ ಬಳಿಯಲ್ಲೇ ಇದ್ದುಕೊಂಡು ತಮ್ಮ ಆಜ್ಞಾನುಸಾರ ಶ್ರೀ ರಾಯರ ಸೇವೆಗೈಯುತ್ತಿದ್ದ ನಂಜನಗೂಡು ಸುಶೀಲೇಂದ್ರಾಚಾರ್ಯರಿಗೆ ಆಶ್ರಮ ಪ್ರದಾನ ಮಾಡಿ ಶ್ರೀಸುಯತೀಂದ್ರತೀರ್ಥರೆಂದು ನಾಮಕರಣ ಮಾಡಿ,  ಗುರೂಪದೇಶ, ಪ್ರಣವೋಪದೇಶವನ್ನು ನೀಡಿ ವೇದಾಂತಸಾಮ್ರಾಜ್ಯಪಟ್ಟಾಭಿಷೇಕವನ್ನು ಮಾಡಿ, ತಮ್ಮ ಉತ್ತರಾಧಿಕಾರಿಗಳೆಂದು ಘೋಷಿಸಿದರು.

ಕಾಲಕ್ರಮೇಣ ಭಗವಂತನ ಸಂಕಲ್ಪದಂತೆ ಶ್ರೀಗಳವರ ದೇಹಸ್ಥಿತಿಯು ಕ್ಷೀಣಿಸಿ ಚಿಕೆತ್ಸೆಗಾಗಿ ಬೆಂಗಳೂರಿಗೆ ಬರಬೇಕಾಯಿತು.   ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ನಡೆದ ಘ್ರಟನೆಗಳನ್ನು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರುಗಳು ಈಗಲೂ ಸಹ ಪುಳಕಿತರಾಗಿ ಸ್ಮರಿಸುತ್ತಾರೆ. ಶ್ರೀಗಳು ಒಮ್ಮೊಮ್ಮೆ ನಿದ್ರಾವಸ್ಥೆಯಲ್ಲಿದ್ದಂತೆ ಕಂಡರೂ ಅವರ ಕೈಗಳು ಏನನ್ನೋ ಅರ್ಚಿಸುತ್ತಿದ್ದವು; ನಂತರ ಮಂಗಳಾರತಿ ಮಾಡಿದರು; ಕೈಮುಗಿದರು; ಇದನ್ನು ಕಂಡ ವೈದ್ಯರಿಗೆ ಅಚ್ಚರಿ; ಹತ್ತಿರದಲ್ಲಿದ ಸಿಬ್ಬಂದಿ ಮಂತ್ರಾಲಯಕ್ಕೆ ದೂರವಾಣಿ ಕರೆಮಾಡಿ ವಿಚಾರಿಸಿದರೆ ಅಲ್ಲಿ ಶ್ರೀಸುಯತೀಂದ್ರರು ಶ್ರೀ ಮೂಲರಾಮನಿಗೆ ಅರ್ಚನೆ ಮಾಡುತ್ತಿದ್ದಾರೆ. ಮಂಗಳಾರತಿ ಮಾಡುತ್ತಿದ್ದಾರೆ. ಒಂದು ಕ್ಷಣವೂ ವ್ಯತ್ಯಾಸವಿಲ್ಲದಂತೆ ಈ ಕಾರ್ಯ ಜರುಗಿದೆ. ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ!

ಆ ದಿನ ಬಂದೇ ಬಿಟ್ಟಿತು. ಶ್ರೀ ಗುರುರಾಜರ ಕರುಣೆಯ ಕಂದ, ಮುಗ್ಧ ಮನಸ್ಸಿನ ಸಂತ, ತಮ್ಮ ನಗು ಮೊಗದಿಂದಲೇ ಭಕ್ತರ ಕಷ್ಟಗಳನ್ನು ಕಳೆದ ಯತಿ,  ಪರಿಶುದ್ಧ ಹೃದಯೀ, ಶುದ್ದಾಂತ ಕರುಣೀ,  ಶ್ರೀರಾಯರ ಆಜ್ಞೆಯಂತೆ ಸಮಾಜದ ಉನ್ನತಿಗಾಗಿ ತಮ್ಮ ತಪಃಶ್ಶಕ್ತಿಯೇ ಮೊದಲಾದ ಸರ್ವಸ್ವವನ್ನೂ ಧಾರೆ ಎರೆದ ಶ್ರೀ ಸುಶಮೀಂದ್ರರು ಧ್ಯಾನಾವಸ್ಥೆಯಲ್ಲಿದ್ದಾಗಲೇ   ವಿರೋಧೀನಾಮ ಸಂವತ್ಸರದ ಚೈತ್ರ ಬಹುಳ ಬಿದಿಗೆ ದಿನಾಂಕ 11-04-2009 ರಂದು ಹರಿಧ್ಯಾನ ಪರರಾದರು. ಕಾರ್ಮೋಡದಂತೆ ಭಕ್ತರ ಕಷ್ಟಕಾರ್ಪಣ್ಯಗಳನ್ನು ತಮ್ಮ ಮುಗ್ದನಗುವಿನ ಕಿರಣಗಳಿಂದಲೇ ಓಡಿಸುತ್ತಿದ್ದ ಶ್ರೀಸುಶಮೀಂದ್ರರೆಂಬ ದಿನಕರ ಅಸ್ತಂಗತನಾದನು.

ಮಂತ್ರಾಲಯದ ದಿವ್ಯ ಸನ್ನಿಧಾನದಲ್ಲಿ ಶ್ರೀಸುಶಮೀಂದ್ರತೀರ್ಥರ ತಾತ್ಕಾಲಿಕ ಬೃಂದಾವನ ಸ್ಥಾಪನೆಯನ್ನು ಮಾಡಿ, ಶ್ರೀಗಳ ಪ್ರಥಮ ಮಹಾಸಮಾರಾಧನೆಯನ್ನು ನೆರವೇರಿಸುತ್ತಾ ಅವರ ಶಿಷ್ಯರಾದ ಶ್ರೀಸುಯತೀಂದ್ರತೀರ್ಥರು ಶ್ರೀಗಳ ಮೇಲೆ ಚರಮಶ್ಲೋಕವನ್ನು ರಚನೆಮಾಡಿದರು.

ಸುಧೀಜನ ಸಮಂದಾರಂ ಸುಧೀಂದ್ರ ಸುತ ಸುಪ್ರಿಯಮ್ |

ಸುಶುಮೀಂದ್ರ ಗುರುಂ ವಂದೇ ಸುಜಯೀಂದ್ರ ಕರೋದ್ಭವಮ್ ||

 

ಇತ್ತ ಶ್ರೀಸುವಿದ್ಯೇಂದ್ರತೀರ್ಥರೂ ಸಹ ತಮ್ಮ ಗುರುಗಳ ಮೇಲೆ ಚರಮಶ್ಲೋಕವನ್ನು ರಚಿಸಿದರು.

ಸುಜಯೀಂದ್ರಾಬ್ಧಿಸಂಭೂತಮ್ ಸುಪ್ರಜಾತಾಪವಾರಣಮ್  |

ಸುಹಾಸಕಿರಣೋಪೇತಮ್ ಸುಶಮಿಂದ್ರವಿಧುಮ್ ಭಜೇ ||

ಕಳಾಕರ್ಷಣ:

ಕಳಾಕರ್ಷಣವೆಂದರೆ ಯತಿಗಳ ದೇಹಾಂತ್ಯವಾದ ಸಮಯದಲ್ಲಿ ತಾತ್ಕಾಲಿಕ ಬೃಂದಾವನವನ್ನು ಸ್ಥಾಪಿಸಿರುತ್ತಾರೆ. ಸ್ವಲ್ಪ ಕಾಲವಾದ ಮೇಲೆ ವಿಧಿಪೂರ್ವಕವಾಗಿ ಸ್ಥಿರ ಬೃಂದಾನವನ್ನು ಪ್ರತಿಷ್ಠಾಪಿಸಿ ಪೂಜಾದಿಗಳಿಗೆ ವ್ಯವಸ್ಥೆ ಮಾಡಲಾಗುತ್ತದೆ. ಸಂಪ್ರದಾಯದಂತೆ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತಿದ್ದಾಗ, ಇತಿಹಾಸದಲ್ಲೇ ಅಪರೂಪವಾದಂತಹ ಪ್ರವಾಹವು ಮಂತ್ರಾಲಯವನ್ನು ಅಪ್ಪಳಿಸಿತು. ಮೂರು ದಿನಗಳ ಕಾಲ ಸುಮಾರು 12-15 ಅಡಿಯಷ್ಟು ನೀರು ಮಠವನ್ನು ಆವರಿಸಿತ್ತು.  ಪವಾಡದ ವಿಚಾರವೆಂದರೆ ಯಾವ ಭಕ್ತರ ಪ್ರಾಣಹಾನಿಯೂ ಆಗಿರಿಲಿಲ್ಲ. ತಾತ್ಕಾಲಿಕ ಕಟ್ಟಡವಿದ್ದರೂ, ತಾತ್ಕಾಲಿಕ ಬೃಂದಾವನ ವಿದ್ದರೂ ಶ್ರೀಸುಶಮೀಂದ್ರತೀರ್ಥರ ದೇಹವನ್ನು ಭೂ ಸ್ಥಾಪನೆಗೈದ ಸ್ಥಳವಂತೂ ಯಾವ ವಿಕಾರವನ್ನೂ ಹೊಂದಿರಲಿಲ್ಲ. ಮುಂದೆ, ದಿನಾಂಕ 04-11-2009ರಂದು ಶುಭ ಮೂಹೂರ್ತದಲ್ಲಿ ಶ್ರೀ ಸುಶಮೀಂದ್ರತೀರ್ಥರ ಬೃಂದಾವನ ಕಳಾಕರ್ಷಣ ಮಹೋತ್ಸವವು ಪ್ರಾರಂಭವಾಯಿತು. ವೈದಿಕ ವಿಧಿ ವಿಧಾನ ಪೂರ್ವಕವಾಗಿ ಕುಂಭದಲ್ಲಿ ಶ್ರೀ ಸುಶಮೀಂದ್ರರ ಕಳೆಯನ್ನು ಆವಾಹನೆ ಮಾಡಲಾಯಿತು. ನಂತರ  ತಾತ್ಕಾಲಿಕ ಬೃಂದಾವನವನ್ನು ಅಗೆದು ಶ್ರೀ ಸುಶಮೀಂದ್ರರ ಪಾರ್ಥಿವ ದೇಹವನ್ನು ಹೊರತೆಗೆದು ಭಕ್ತರಿಗೆ ದರ್ಶನಮಾಡಿಸಲಾಗಿತ್ತು. ಅಲ್ಲಿ ಎಲ್ಲರಿಗೂ ಮತ್ತೊಮ್ಮೆ ಶ್ರೀ ಸುಶಮೀಂದ್ರರ ತಪಃ ಶಕ್ತಿಯ, ಸಿದ್ಧಿಯ ಅನುಭವವಾಗಿ ಪವಾಡವನ್ನು ಕಣ್ಣಾರೆ ಕಂಡರು. ಜಯಕಾರಗಳು  ಮುಗಿಲುಮುಟ್ಟಿದ್ದವು. ಪ್ರವಾಹದಲ್ಲಿ ಎರಡು ಮೂರು ದಿನ ಪೂರ್ತಿ ಮುಳುಗಿದ್ದರೂ ಸಹ,  ಭೂಸ್ಥಾಪನೆಯಾಗಿ ಹಲವು ಮಾಸಗಳೇ ಕಳೆದಿದ್ದರೂ ಸಹ, ಮತ್ತೇ ಹೊರತೆಗೆದಾಗ ಶ್ರೀ ಸುಶಮೀಂದ್ರರ ದೇಹವು ಹಿಂದಿನಂತೆಯೇ ದಿವ್ಯಕಾಂತಿಯಿಂದ ಹೊಳೆಯುತ್ತಿತ್ತು. ಹಚ್ಚಿದ ನಾಮ, ಧರಿಸಿದ್ದ ತುಳಸಿಮಾಲೆ ಒಂದಿಷ್ಟೂ ಬದಲಾಗಿದ್ದಿಲ್ಲ. ಈ ಸಂದರ್ಭವನ್ನು ರಿತ್ತಿರಾಯರೆಂದೇ ಪ್ರಸಿದ್ಧರಾದ ಶ್ರೀ ಧೀರೇಂದ್ರತೀರ್ಥರ ಕಳಾಕರ್ಷಣ ಸಮಯದಲ್ಲಿದ್ದಂತೆ ಎಂದು ಹಿರಿಯರು ಮಾತನಾಡಿಕೊಳ್ಳುತ್ತಿದ್ದರು.  ಮತ್ತೆ ಕೆಲವರು ಶ್ರೀ ಸುಶಮೀಂದ್ರತೀರ್ಥರನ್ನು ಅಭಿನವ ಜಿತಾಮಿತ್ರರೆಂದೇ ಹೇಳುತ್ತಿದ್ದರು.

ಇಂದಿಗೂ ಶ್ರೀಸುಶಮೀಂದ್ರತೀರ್ಥರ ಸನ್ನಿಧಾನ ಅವರ ದಿವ್ಯ, ಭವ್ಯ ಬೃಂದಾವನದಲ್ಲಿದೆ. ಆರಾಧನಾದಿನಗಳಂದು ವಿಶೇಷ ಅಭಿಷೇಕ, ಅಲಂಕಾರಾದಿಗಳು ಬಹು ವೈಭವದಿಂದ ನಡೆಯುತ್ತಿದೆ. ಇಂದಿಗೂ ಗುರುಗಳ ಆರಾಧನಾ ದಿನಗಳಂದು ತಿರುಪತಿ ತಿಮ್ಮಪ್ಪನ ಅನುಗ್ರಹರೂಪದಲ್ಲಿ ಶೇಷವಸ್ತ್ರ ಬೃಂದಾವನವನ್ನು ಅಲಂಕರಿಸುತ್ತಿದೆ. ಅಷ್ಟೇ ಅಲ್ಲ! ಭಕ್ತರ ಮೇಲೆ ಗುರುಗಳ ಅನುಗ್ರಹವೂ ಅದೇ ರೀತಿಯಲ್ಲಿ ನಡೆಯುತ್ತಿದೆ. ಇಲ್ಲಿ ಬಂದು ರಾಯರ ಜೊತೆಯ ಶ್ರೀಸುಶಮೀಂದ್ರರ ಸೇವೆ ಮಾಡುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.

ಶ್ರೀಸುಶಮೀಂದ್ರತೀರ್ಥರ ಕುರಿತಾಗಿ ಈಗಾಗಲೇ ಅನೇಕ ಪುಸ್ತಕಗಳು ಪ್ರಕಟಗೊಂಡಿವೆ. ಶ್ರೀಸುಶಮೀಂದ್ರಸೇವಾ ಪ್ರತಿಷ್ಠಾನದ “ಸುಮಂದಾರ” ಗುರುಗಳ ಜೀವನದ ಸಮಗ್ರಚಿತ್ರಣವನ್ನು ತೋರಿಸಿದೆ. ಶ್ರೀರಾಘವೇಂದ್ರಸ್ವಾಮಿ ಮಠ, ಮಂತ್ರಾಲಯದಿಂದ ಪ್ರಕಟವಾದ, ಡಾ||ವಾದಿರಾಜ ರಾ ಪಂಚಮುಖಿಯವರಿಂದ ವಿರಚಿತವಾದ “ಶ್ರೀಸುಶಮೀಂದ್ರತೀರ್ಥಾಭಿವಂದನಮ್” ಎಂಬ ಸಂಸ್ಕøತ ಕಾವ್ಯ, ಗುರುಗಳ ಜೀವನದ ಪ್ರಮುಖ ಘಟ್ಟಗಳನ್ನು ಸುಂದರ, ಸರಳ ಸಂಸ್ಕøತ ಶ್ಲೋಕಗಳಲ್ಲಿ ಸೆರೆ ಹಿಡಿದಿದೆ. ಶ್ರೀಪೂರ್ಣಪ್ರಜ್ಞವಿದ್ಯಾಪೀಠ, ಬೆಂಗಳೂರು ಇವರಿಂದ ಪ್ರಕಾಶನಗೊಂಡ “ಶ್ರೀಸುಶಮೀಂದ್ರ ವೈಭವ” ಕೃತಿಯು ನಾಡಿನ ಉತ್ತಮ ಪಂಡಿತರಿಂದ ಗುರುಗಳ ಮೇಲೆ ಬರೆಯಲ್ಪಟ್ಟ ಉತ್ತಮ ಲೇಖನಗಳ ಸಂಗ್ರಹವಾಗಿದೆ. ಅಷ್ಟೇ ಅಲ್ಲದೇ ನೂರಾರು ದಾಸರ ಪದಗಳು, ಸುಳಾದಿಗಳು ರಚನೆಯಾಗಿವೆ. “ಪರಿಮಳ” ಮಾಸಪತ್ರಿಕೆಯಂತೂ “ಶ್ರೀಸುಶಮೀಂದ್ರವಿಜಯವೈಜಯಂತೀ” ಎಂಬ ಸುಂದರವಾದ ವಿಶೇಷ ಸಂಚಿಕೆಯನ್ನು ಶ್ರೀಗಳವರ ಉಪಸ್ಥಿತಿಯಲ್ಲೇ ಹೊರತಂದಿದ್ದು, ಶ್ರೀಸುಶಮೀಂದ್ರತೀರ್ಥರ ಅಂಕಿತ-ಅನುಗ್ರಹ ದೊರೆತದ್ದು ತುಂಬಾ ವಿಶೇಷವಾದ ಸಂಗತಿ.

 

 

madhwamrutha

Tenets of Madhwa Shastra

You may also like...

6 Responses

  1. Sunil Desai says:

    Super 🙏🏻🙏🏻🙏🏻🙏🏻🙏🏻🙏🏻🙏🏻🙏🏻🌹🌹🌹🌹🌹🚩🚩🚩🚩

  2. Padmanabha says:

    Excellent info n images. Pls post summary of the books n few other thirta yatra photos

  3. Padmanabha says:

    Excellent info n images

  4. Prasad says:

    Great

  5. Rama says:

    Very Nice article on Nadedaduva Rayaru, Shri Sushaleendra Theertharu

  6. Muralidhar says:

    It’s just unbelievable, this morning sri sushamindra swamiji came in my dreem and doing sri ram devara puja. Now i am seeing same thing thro’ madhwamruta email. Just mesmerizing!!!

Leave a Reply

Your email address will not be published. Required fields are marked *